Sunday, May 1, 2011
ಒಂದು ಮುತ್ತಿನಾ ಕಥೆ!!!
ಅದೊಂದು ದೊಡ್ಡ ವಿಶಾಲವಾದ ಸಮುದ್ರ
ಕೇಳುತ್ತಿದ್ದುದ್ದು ಬರೀ ಅಲೆಗಳ ಸುಮಧುರ ಗಾನ
ಆ ಅಲೆಗಳು, ತಂಗಾಳಿಯ ಹಾಡಿಗೆ ನರ್ತಿಸುತ್ತಿರುವಂತಿತ್ತು
ಕಂಡೆ ನಾನಾಗ, ದೂರದಲ್ಲೊಂದು ಬಿಸಿಲಿಗೆ ಪ್ರಕಾಶಿಸುತ್ತಿದ್ದ ಮುತ್ತೊಂದ್ದನ್ನು
ಹತ್ತಿರ ಹೋಗುತ್ತಿದ್ದಾಗ, ಕಿಡಿಗೇಡಿ ಅಲೆಯೊಂದು ಮುತ್ತನ್ನು ಮತ್ತೆ ಸಮುದ್ರದೊಳಗೆ ಕೊಂಡೊಯ್ಯುವುದ ಕಂಡೆ
ನನ್ನ ಕಣ್ಮುಂದೆಯೇ, ಅಮೂಲ್ಯವಾದ ಮುತ್ತು ನನ್ನ ಬಿಟ್ಟು ಹೊಗುತ್ತಿದೇ ಎಂಬ ಬೇಸರ
ಮತ್ತೊಂದು ಅಲೆ, ಸ್ನೇಹಿತನಂತೆ ಅದನು ನನ್ನ ಬಳಿ ತರುವುದೆಂಬ ನಂಬಿಕೆ
ಅಲೆಯೂ ಸ್ನೇಹಿತನಾಗಲಿಲ್ಲ, ನನಗೆ ಮುತ್ತೂ ಹಿಂದಿರುಗಿ ಬರುವ ನಂಬಿಕೆಯೂ ಉಳಿಯಲಿಲ್ಲ
ಆ ಮುತ್ತನು ಹಾಗೇ ಬಿಟ್ಟುಬಿಡಬೇಕೋ, ಇಲ್ಲ ಹಿಂಬಾಲಿಸಬೇಕೋ ಎಂಬ ಗೊಂದಲ
ಅದನ್ನು ಪ್ರಯತ್ನಿಸದೆ ಅಷ್ಟು ಸುಲಭವಾಗಿ ಕಳೆದು ಕೊಳ್ಳಬಾರದೆಂಬ ಹಠ
ನಿರ್ಧರಿಸಿದೆ, ಆ ಮುತ್ತನು ಹಿಂಬಾಲಿಸಬೇಕೆಂದು, ನನ್ನದಾಗಿಸಿಕೊಳ್ಳಬೇಕೆಂದು
ಎಂದೂ ನೀರಿನಲ್ಲಿ ಈಜಿದವನಲ್ಲ, ಅಂದೇನೋ ಧೈರ್ಯ ಮಾಡಿಬಿಟ್ಟೆ, ಹೆದರದೇ ಸಮುದ್ರದಲ್ಲಿ ಬಿದ್ದುಬಿಟ್ಟೆ
ಮುತ್ತು ದೂರದಲ್ಲಿ ಕಾಣಿಸುತ್ತಿದೆ, ಅಲೆಗಳು ಶಕ್ತಿ ಮೀರಿ ಹೊಡೆಯುತ್ತಿವೆ
ಹಿಂದೆ ಸರಿದರೇ ಮುತ್ತಿಲ್ಲ, ಜೀವನದಲ್ಲಾಗ ಬರೀ ಕೊರಗೇ, ನನ್ನ ಮನಸ್ಸಿಗೆ ನಾನೇ ಮೋಸ ಮಾಡಿಕೊಂಡಂತೆ
ಏತಕ್ಕಾದರೂ ಬಂದೆನಪ್ಪಾ ಇಲ್ಲಿಗೆ?? ಎಂಬ ಯೋಚನೆ ಕೆಲ ಕಾಲ ತಲೆಯಲ್ಲಿ ಆವರಿಸಿ ಬಿಟ್ಟಿತಾದರೂ
ಅದನು ಕಿತ್ತೆಸೆದೆ, ಛಲದಿಂದ ಮುನ್ನುಗಿದೆ, ಅಲೆಗಳ ಧೈರ್ಯವಾಗಿ ಎದುರಿಸಿದೆ. ಮುತ್ತಿನ ಹತ್ತಿರ ಕೊನೆಗೂ ಸೆರಿಯೇಬಿಟ್ಟೆ.
ಆ ಮುತ್ತು!!! ಪದಗಳೇ ಬರುವುದಿಲ್ಲ, ಆ ಸಂತಸದ ಕ್ಷಣವನ್ನು ವರ್ಣಿಸಲು, ಆ ಮರೆಯಲಾಗದ ಅನುಭವವನ್ನು ವ್ಯಕ್ತಪಡಿಸಲು
ಆ ಚಳಿಯಲ್ಲೂ ಬೆವರಿದೆ, ದಣಿದ್ದಿದ್ದರೂ, ಎಲ್ಲವನು ಮರತುಬಿಟ್ಟೆ, ಕಣ್ಮುಂದೆ ನನ್ನ ಸುಂದರವಾದ ಮುತ್ತು!!!
ಕನಸಲ್ಲಿ ಅಂದೆಂದೋ ಕಂಡ ನನ್ನ ಮುದ್ದಾದ ಮುತ್ತು, ಇದು ನನಸಾ ಎಂದು ಒಮ್ಮೆ ಸಂಶಯಪಟ್ಟೆ
ಇದೆಲ್ಲದರ ನಡುವೆ, ನಾ ಗಮನಿಸಿದ್ದು, ಆ ಹೊಳೆಯುವ ಮುತ್ತಿಗಿದ್ದ ಸುಂದರ ಕಣ್ಣುಗಳಲ್ಲಿ ಸುರಿಯುತ್ತಿದ್ದ ಕಣ್ಣೀರ ಧಾರೆಯ
ಮುತ್ತೂ?? ಕಣ್ಣೀರು?? ಹಾ. ಅದೊಂದು ಜೀವಂತ ಮುತ್ತು, ಕನಸಲ್ಲೂ ಕಾಣಲಾಗದ ಅಪೂರ್ವವಾದ ಮುತ್ತು
"ನಿನಗಾಗಿ ಬಹಳ ಯೋಚಿಸಿ, ಕಷ್ಟಪಟ್ಟು, ಅಲೆಗಳ ಕೋಟೆಯನ್ನೇ ಭೇಧಿಸಿ ಇಲ್ಲಿಗೆ ಬಂದಿರುವೆ, ನೀ ಏಕೆ ಹೀಗೆ ಅಳುತ್ತಿರುವೆ" ಎಂದೆ
"ನೀನು ನನ್ನನ್ನು, ನನ್ನ ಮನಸ್ಸನ್ನು ಅಪಹರಿಸಿ ಹೋಗುವುದು ನನಗಿಷ್ಟವಿಲ್ಲ, ನಾ ಇಲ್ಲೇ, ಹೀಗೇ, ಸುಖವಾಗಿ ಇರುವೆ, ಇಲ್ಲಿಯೆ ಬಿಟ್ಟುಬಿಡು" ಎಂದು ಹೇಳಿಬಿಟ್ಟಿತು
ತಡೆಯಲಾಗದ ಬೇಸರವಾಯಿತು, ಇಲ್ಲವೆಂದಲ್ಲ, ಆದರೆ ಆ ಸುಂದರವಾದ ಕಣ್ಣಿನಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ನೀರನು ನೋಡಲಾಗಲಿಲ್ಲ, ಮರು ಪ್ರಶ್ನೆ ಕೇಳುವ ಮನಸ್ಸೂ ಮಾಡಲಿಲ್ಲ
ಅಷ್ಟೇ, ಬಂದ ದಾರಿಯೇನೋ ಪರೀಕ್ಷಿಸುವಂತಿತ್ತು, ಅನುಭವವೂ ಹೊಸದರಂತಿತ್ತು. ಆದರೆ ಕಂಡ ಕನಸುಗಳು ನನಸಾಗಲಿಲ್ಲ, ಹಿಂದಿರುಗಲೇಬೇಕೆಂಬ ಕಠು ಸತ್ಯದ ಅರಿವಾಯಿತು
ಅಲ್ಲಿಯವರೆಗೂ ಉತ್ಸಾಹದಿಂದಿದ್ದ ಕುಣಿಯುತ್ತಿದ್ದ ಹುಚ್ಚು ಮನಸ್ಸು, ಕಣ್ಣೀರಿಗೆ ಕರಗಿ ಮಂಕಾಗಿ ಮೂಲೆ ಸೇರಿ ಹಿಂದೆಸರಿದುಬಿಟ್ಟಿತು
ಆದರೂ ಮನದ ಮೂಲೆಯಲ್ಲೊಂದು ಸಣ್ಣ ಆಸೆ, ವಿಶ್ವಾಸ. ಆ ಮುತ್ತು ನನ್ನೊಡನೆ ಬರಲು ಎಂದಾದರೂಮ್ಮೆ ಮನಸ್ಸು ಮಾಡುವುದೆಂದು
ಆ ಸುಂದರ ಒಂಟಿ ಮುತ್ತು, ನನ್ನ ಜೋಡಿಯಾಗುವ ಆ ಕನಸಿನ ದಿನವನ್ನು ಕಾಯುವುದ ನಿಲ್ಲಿಸನಾನೆಂದೆಂದು
ನಾನಾಗೇ ಹಿಂದಿರುಗಿ ಹೋಗಲಾರೆ ಆ ಮುತ್ತನು ಅದರ ಪುಟ್ಟ ಲೋಕದಿಂದ ಹೊರತರಲು
ಆದರೆ ಸಾದ್ಯವೇ ಇಲ್ಲ, ಆ ಮುತ್ತಿನೊಡನೆ ಕಳೆದ ಕೆಲವು ಸವಿಯಾದ ಕ್ಷಣಗಳನ್ನು ಮರೆಯಲು
ಎಷ್ಟು ಹುಡುಕಿದರೂ, ಎಲ್ಲಿಯೂ ಸಿಗದ ಸುಂದರ ಸ್ಪೂರ್ತಿಯ ಸೆಲೆ ಆ ಮುತ್ತು
ಎಷ್ಟೇ ಗಟ್ಟಿಯಾಗಿ ಹಿಡಿಯಲು ಹೋದರೂ, ಜಾರಿ ಹೋಗಿಬಿಡುವುದು ಕೈಯಿಂದ ಮರಳು
Subscribe to:
Post Comments (Atom)
No comments:
Post a Comment