
ಕಾವೇರಿ-ಅರಕಾವತಿ ನದಿಗಳು ಸಂಗಮಿಸುವ ಸ್ಥಳ-ಸಂಗಮ
ಈ ಸ್ಥಳಕ್ಕೆ ಮೇಕೆದಾಟೆಂದು ಹೆಸರು ಬರಲು ಕಾರಣ, ಹಿಂದೆ ಅಲ್ಲಿಯ ಕುರೀಕಾಯುವವನೊಬ್ಬ ಬಹಳ ವರುಷಗಳ ಹಿಂದೆ ಕಂಡ ಒಂದು ಘಟನೆಯಿಂದಂತೆ. ಹಿಂದೊಮ್ಮೆ ಒಂದು ದಿನ ಮುಗ್ಧ ಮೇಕೆಯೊಂದನ್ನು ಹಸಿದ ಹುಲಿ ಮಹಾರಾಯನು ಅಟ್ಟಿಸಿಕೊಂಡು ಬರುತ್ತಿತ್ತಂತೆ. ಆಗ ಪ್ರಾಣ ಉಳಿಸಿಕೊಳ್ಳುವ ಪರಿಯಲ್ಲಿ ಆ ಮೇಕೆಯು ಬಂಡೆಗಳ ನಡುವೆ ರಭಸದಿಂದ ಹರಿಯುತ್ತಿದ್ದ ನದಿಯನ್ನು ಒಂದೇ ಜಿಗಿತದಲ್ಲಿ ಹಾರಿಬಿಟ್ಟಿತ್ತಂತೆ. ಆದರೆ ಹುಲಿರಾಯನು ಮೇಕೆ ಹಾರಿದ್ದನ್ನು ಕಂಡರೂ ಕೂಡ ಆ ಸಾಹಸಕ್ಕೆ ಮನಸ್ಸು ಮಾಡದೆ, ಮೇಕೆಯನ್ನು ಹಿಂಬಾಲಿಸುವ ಕಾರ್ಯವನ್ನೇ ನಿಲ್ಲಿಸಿ ಹಸಿದ ಹೊಟ್ಟೆಯಲ್ಲೇ ಹಿಂತಿರುಗಿ ಹೋಯಿಯಂತೆ. ಮೇಕೆ ಹಾರಿದ ಆ ಜಾಗ, ಕಾವೇರಿ ನದಿಯು ಹರಿಯುವಿಕೆ ಇಂದ ಮಣ್ಣು ಸವಳಿಕೆಯಾಗಿ ಈಗ ಸ್ವಲ್ಪ ಅಗಲವಾಗಿಬಿಟ್ಟಿದೆ.

ನಿನ್ನ ಕೈಲಾದರೆ ನನ್ನ ಹಿಡಿ ನೋಡುವ!!!
ಈ ಸ್ಥಳಕ್ಕೆ ಪೌರಾಣಿಕ ಹಿನ್ನಲ್ಲೆಯೂ ಇದೆ. ಒಂದು ಕಥೆಯ ಪ್ರಕಾರ ಕಾವೇರಿ ನದಿಯನ್ನು ದಾಟಿದ ಮೇಕೆ ವೇಷಮರಿಸಿಕೊಂಡಿದ್ದ ಪರಮಾತ್ಮ ಶಿವನಂತೆ. ನದಿಯ ಎರಡು ಬದಿಯಲ್ಲೂ ದೊಡ್ಡ ದೊಡ್ಡ ಬಂಡೆಗಳಿವೆ. ಅದರ ಮೇಲೆ ವಿಚಿತ್ರವಾದ ರಂದ್ರಗಳನ್ನು ಕಾಣಬಹುದು. ಅವುಗಳ ಗಾತ್ರ ದೊಡ್ಡದಾದರೂ, ಅವೆಲ್ಲವು ಮೇಕೆಯ ಪಾದದ ಗುರುತುಗಳಂತೆ ಕಾಣುತ್ತವೆ. ಪ್ರಾಯಶಃ ಮೇಕೆಯಂತೆ ವೇಷಮರಿಸಿಕೊಂಡಿದ್ದ ಶಿವನು ಆ ಬೃಹತ್ತಾದ ಬಂಡೆಗಳ ಮೇಲೆ ಈ ರೀತಿ ಮಾಡಿದ್ದನೇನೋ.

ಜೀವನದಲ್ಲಿ ಏಳೂ-ಬೀಳು ಸಹಜ!!!
ಈ ಸ್ಥಳಕ್ಕೆ ತಲುಪಬೇಕೆಂದರೆ ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ನೇರವಾಗಿ ಸಾಗಬೇಕು. ಕನಕಪುರ ತಲುಪಿದ ನಂತರ ಎಡಕ್ಕೆ ತಿರುಗಿದರೆ ನೇರ ರಸ್ತೆ. ಪ್ರಯಾಣದ ಉದ್ದಕ್ಕೂ ಹಸಿರಿನಿಂದ ಕಂಗೊಳೆಸುವ ಹೊಲಗದ್ದೆಗಳು, ಬಣ್ಣ ಬಣ್ಣದ ಹೂ ತೋಟಗಳು ನಿಮ್ಮ ಗಮನಸೆಳೆಯುತ್ತವೆ. ಈ ಪ್ರದೇಶದಲ್ಲಿ ರೇಷ್ಮೆ ಉತ್ಪನ್ನಕ್ಕು ಹೆಚ್ಚಿನ ಒತ್ತು ನೀಡಲಾಗುತ್ತದೆ. ಹೀಗೆ ಪ್ರಕೃತಿಯ ನಡುವೆ ಸಾಗುತ್ತ ಬಂದರೆ ಎರಡು ತಾಸಿನಲ್ಲಿ ಸಂಗಮ ತಲುಪಬಹುದು. ಬಸ್ಸಿನಲ್ಲಿ ಬರಬೇಕೆಂದರೆ ಬೆಂಗಳೂರಿನ ಬನಶಂಕರಿಯಿಂದ ಕನಕಪುರಕ್ಕೆ ಬಂದು, ಕನಕಪುರದಿಂದ ಸಂಗಮಕ್ಕೆ ನಿರಾಯಾಸವಾಗಿ ಸೇರಬಹುದು. ಸಂಗಮದಲ್ಲಿ ಶಾಂತವಾಗಿ ವಿರಮಿಸುವ ಅರಕಾವತಿ ನದಿಯನ್ನು ಶ್ರಮವಿಲ್ಲದೆ ಕಾಲುದಾರಿಯಲ್ಲೇ ದಾಟಬಹುದು. ಮಳೆಗಾಲದಲ್ಲಿ ಮಾತ್ರ ದಾಟಲು ಕಷ್ಟವಾದ್ದರಿಂದ ಅಲ್ಲಿರುವ ತೆಪ್ಪದ ಸೌಲಭ್ಯವನ್ನು ಉಪಯೊಗಿಸಿಕೊಳ್ಳಬಹುದು. ಹದಿನೈದು ನಿಮಿಷದ ತೆಪ್ಪದ ಪಯಣದ ನಂತರ ಅಚ್ಚರಿ ಮೂಡಿಸುವ ಬಸ್ಸೊಂದು ನಿಮ್ಮ ಕಣ್ಣನ್ನು ಸೆಳೆಯುವುದು. ಅದರಲ್ಲಿ ಕುಳಿತರೆ ಹತ್ತೇ ನಿಮಿಷದಲ್ಲಿ ಮೇಕೆದಾಟನ್ನು ಸೇರಬಹುದು. ಆ ಹತ್ತು ನಿಮಿಷದ ಪಯಣ ಸ್ವಲ್ಪ ಕಷ್ಟವಾದರು, ಅದೊಂದು ಮರೆಯಲಾಗದ ಅನುಭವ. ಕೆಲವೊಮ್ಮೆ ಆಯಾಸದಲ್ಲು ಸುಖವಿರುತ್ತಂತೆ, ಈ ಬಸ್ಸಿನ ಪ್ರಯಾಣವನ್ನು ಮಾಡೇ ಹೇಳಿದ್ದರೇನೊ ಹಿರಿಯರು. ಆ ಜಾಗಕ್ಕೆ ತಲುಪಿದ ನಂತರ ಕಲ್ಲು ಬಂಡೆಗಳ ನಡುವೆ ಸ್ವಲ್ಪದೂರ ನಡೆದರೆ ಎಂದೂ ಊಹಿಸಲಾಗದ ಸುಂದರ ದೃಶ್ಯವೊಂದನ್ನು ನೀವು ಕಾಣಬಹುದು. ನನಗಂತೂ ಅದೊಂದು ಮರೆಯಲಾಗದ ಅನುಭವ. ದೇವರು ಸ್ರುಷ್ಟಿಸಿರುವ ಆ ಬಣ್ಣ ಬಣ್ಣದ ಚಿತ್ರವನ್ನು ವೀಕ್ಷಿಸಿ, ಅವನಿಗೊಂದು ನಮನ ಹೇಳದೆ ನೀವು ನಿಲ್ಲರಾರಿರಿ.

ನಾನೇ ತೆಪ್ಪದ ರಾಜಕುಮಾರ

ಮೇಕೆದಾಟುವಿನ ಒಂದು ರಮಣೀಯ ನೋಟ

ಬಸ್ಸು ಬಸ್ಸು ಬಸ್ಸು ಡಕೊಟ ಎಕ್ಸಪ್ರೆಸ್ ಬಸ್ಸು-ನಮ್ಮನ್ನು ಸಂಗಮದಿಂದ ಮೇಕೆದಾಟುವಿಗೆ ಕೊಂಡೊಯ್ದ ವಾಹನ
ಈ ಸುಂದರ ಪ್ರದೇಶದಲ್ಲಿ ಎಷ್ಟು ಹೊತ್ತಾದರೂ ಸಮಯ ಕಳೆಯಬಹುದು. ಆದರೆ ಒಂದು ತಪ್ಪು ಹೆಜ್ಜೆ ಇಟ್ಟಿರೋ, ಅಪಾಯ ಖಂಡಿತ. ಅಷ್ಟೊಂದು ರಭಸದಿಂದ ನೀರು ಹರಿಯುವ ಸ್ಠಳ ಮೇಕೆದಾಟು. ಅನೇಕ ಮಂದಿ ಅತೀ ಉತ್ಸುಕರಾಗಿ ಇಲ್ಲಿ ತಮ್ಮ ಪ್ರಾಣ ಕಳೆದುಕೊಂಡ್ದಿದ್ದಾರೆ. ನಾವು ಸದಾ ಪ್ರಕೃತಿಯನ್ನು ಹೇಗಿದೆಯೋ ಹಾಗೆ ನೊಡಿ ಆನಂದಿಸಬೇಕೇ ಹೊರತು ಅದರ ವಿರುದ್ದ ಹೋಗಲು ಪ್ರಯತ್ನಿಸಬಾರದು. ಇಂತಹಾ ಒಂದು ಸುಂದರ, ಮನಮೋಹಕ ಸ್ಥಳದಲ್ಲಿ ಸಮಯ ಕಳೆದ ಕ್ಷಣಗಳನ್ನು ನಾನಂತೂ ಮರೆಯಲಾರೆ. ಮೇಕೆದಾಟಿನ ನೆನಪುಗಳು ನನ್ನ ಮನದಲ್ಲಿ ಭದ್ರವಾಗಿ ನೆಲೆಸಿಬಿಟ್ಟಿವೆ. ನೀವ್ಯಾರಿಗಾಗಿ ಕಾಯುತ್ತಿರುವಿರಿ, ಈ ವಾರವೇ ಮೇಕೆದಾಟಿಗೆ ಹೋಗಿ ಬನ್ನಿ. ಸುಂದರ ಪ್ರಕೃತಿಯ ವಿಶೇಷತೆಗಳ ಅನುಭವವನ್ನು ಸವಿದು ಬನ್ನಿ. ನಿಮ್ಮ ಪ್ರಯಾಣ ಸುಖವಾಗಿರಲಿ.

ರಭಸದಿಂದ ಹರಿಯುತ್ತಿರುವ ಕಾವೇರಿ ನದಿ

ಸಹಾಯ ಬೇಡಿ ಬಂದ ಅಜ್ಜಿ