ಅಂದು ನಮ್ಮ ಇನ್ಫೋಸಿಸ್ನಲ್ಲಿ ಕನ್ನಡ ರಾಜ್ಯೋತ್ಸವ
ಕಾರ್ಯಕ್ರಮದ ಗಡಿಬಿದಿಯಲ್ಲಿದ್ದೆ. ಸುಮಾರು
ಒಂದೂವರೆ ತಿಂಗಳುಗಳಿಂದ ಕಾರ್ಯಕ್ರಮಕ್ಕಾಗಿ ಪಟ್ಟ ಶ್ರಮಗಳಿಗೆಲ್ಲಾ ಫಲ ಸಿಗುತ್ತಿದ್ದ ಸಮಯ. ಆ
ದಿನದೊರೆಗೂ ಕಾರ್ಯಕ್ರಮಗಳು ಹೇಗೆ ಮೂಡಿ ಬರಬೇಕೆಂದು ಯೋಚಿಸಿದ್ದೆವೋ, ಹಾಗೆ ನಡೆದಿತ್ತು. ಆದರೆ "ದಿ
ಡೇ" ಅಂದಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ದಿವಸ. ಮಳಿಗೆಗಳು, ಕ್ಲಿಕ್ ಕರ್ನಾಟಕ,
ಕರ್ನಾಟಕ ಪರಿಚಯ, ಅಂತ್ಯಾಕ್ಷರಿ ಮುಂತಾದವುಗಳಿಂದ ಭರ್ಜರಿಯಾಗಿ ಕಾರ್ಯಕ್ರಮದ ಬಗ್ಗೆ ಪ್ರಚಾರ
ಮಾಡಿದ್ದೆವು. ಇದೆಲ್ಲದುದರ ಫಲಶ್ರುತಿಯಾಗಿ ಅಂದು ನಮ್ಮ ಆಡಿಟೋರಿಯಂ ತುಂಬಿ ತುಳುಕುತ್ತಿತ್ತು.
ಸ್ವಯಂಸೇವಕರು ಜುಬ್ಬಾ ಪೈಜಾಮ, ಸ್ವಯಂಸೇವಕೀಯರು ಸೀರೆಯಲ್ಲಿ ಮಿಂಚುತ್ತಿದ್ದರು. ಪ್ರತಿವರ್ಷದಂತೆ
ಈ ಭಾರಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಲ್ಲಿದ್ದವು. ಆದರೆ ಈ ಭಾರಿ ವಿಶೇಷವಾಗಿ
ಇಬ್ಬರು ಗಣ್ಯರಿಗೆ ಸನ್ಮಾನ ಮಾಡಲು ನಿರ್ಧರಿಸಿದ್ದೆವು. ಪ್ಯಾರಾಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ
ಗೆದ್ದ ಗಿರೀಶ ಹೊಸನಗರ ಮತ್ತು ನಮ್ಮ ಜಿಮ್ ತರಬೇತುದಾರರಾದ, ಶ್ರೀನಿವಾಸ್ ಅವರುಗಳಿಗೆ. ಕಾರ್ಯಕ್ರಮ
ಭರ್ಜರಿಯಾಗಿ ನಾಡ ಗೀತೆಯೊಂದಿಗೆ ಪ್ರಾರಂಭವಾಯಿತು. ನಂತರ ದೀಪ ಹಚ್ಚಿ ಗಣ್ಯರಿಗೆ ಸನ್ಮಾನ
ಸಮಾರಂಭವು ನಡೆಯಿತು. ಗಣ್ಯರೆಲ್ಲರೂ ಒಂದೆರಡು ಮಾತಗುಳನ್ನಾಡಿ ಮುಗಿಸಿದರು. ಇದೆಲ್ಲಾ ನಡೆಯುವಾಗ
ನಾನು ಮೊದಲ ಸಾಲಿನಲ್ಲೇ ಕುಳಿತು, ನನ್ನ ಕ್ಯಾಮರಾದಿಂದ ಆ ಸಂತಸದ ಕ್ಷಣಗಳನ್ನು
ಸೆರೆಹಿಡಿಯುತ್ತಿದ್ದೆ.. ಆಗತಾನೆ ಸನ್ಮಾನಿತರಾದ ಗಿರೀಶ, ನನ್ನ ಪಕ್ಕ ಬಂದು ಆಸೀನರಾದರು. ಆಗ
ನಡೆದಿದ್ದು ಈ ಅಚ್ಚರಿಯ, ಮರೆಯಲಾಗದ ಸಂಭಾಷಣೆ.
ನಾನು: ಗಿರೀಶ ಅವರೆ, ನಾನು
ಪ್ರದೀಪ. ನಿಮಗೆ ಬೆಳ್ಳಿ ಪದಕ ಗೆದ್ದದ್ದಕ್ಕೆ ಶುಭಾಶಯಗಳು.
ಗಿರೀಶ: ಥ್ಯಾಂಕ್ಸ್ ಪ್ರದೀಪ್ ಅವ್ರೆ. ತುಂಬಾ ಖುಷಿಯಾಗ್ತಿದೆ ಇವತ್ತು.
ನಾನು: ನೀವು ಪದಕ ಗೆದ್ದಾಗ
ನಮಗೂ ಬಹಳಾ ಖುಷಿಯಾಗಿತ್ತು. ನಿಮ್ಮುನ್ನ ಒಮ್ಮೆ ನೋಡೋ ಆಸೆ ಇತ್ತು. ಇವತ್ತು ಸಾಧ್ಯವಾಯ್ತು.
ಗಿರೀಶ: ನನಗು ಇನ್ಫೋಸಿಸ್ ನನ್ನ ಸನ್ಮಾನ ಮಾಡಿದ್ದು ಬಹಳಾ ಖುಷಿಯಾಯ್ತು.
ಒಂದು ಕಾರ್ಯಕ್ರಮದಲ್ಲಿ ನಿಮ್ಮ ಇನ್ಫೋಸಿಸ್ನ ಗಣ್ಯರೊಬ್ಬರು ಸಿಕ್ಕಿದ್ರು. ಅವರು ನಿಮ್ಮುನ್ನಾ
ನಮ್ಮಲ್ಲಿಗೆ ಕರುಸ್ತೀವಿ ಅಂತ ಹೇಳಿದ್ರು. ಆದರೆ ಇಷ್ಟು ಬೇಗಾ ಅಂತ ಅಂದುಕೊಂಡಿರಲಿಲ್ಲ.
ನಾನು: ಹಾ. ಈ ಬಾರಿ,
ಕ್ರೀಡಾಪಟುಗಳನ್ನು ಸನ್ಮಾನಿಸಬೇಕೆಂದು ನಿರ್ಧರಿಸಿದಾಗ ನಿಮ್ಮ ಹೆಸರುಬಿಟ್ಟು ಬೇರೆಯಾರ ಹೆಸರು ಬರಲೇ
ಇಲ್ಲ. ಹೇಗನ್ನುಸ್ತಾ ಇದೆ ಗಿರೀಶ್ ಈ ಸನ್ಮಾನಗಳು, ಉಡುಗೊರೆಗಳೆಲ್ಲಾ ಸಿಗ್ತಾ ಇರೋದ್ರು ಬಗ್ಗೆ.
ಗಿರೀಶ: ತುಂಬಾ ಸಿಕ್ತಾ ಇದೆ ಈ ನಡುವೆ. ನೋಡಿ ರಾಷ್ಟ್ರಮಟ್ಟದಲ್ಲಿ ಪ್ರತೀಬಾರಿ ಗೆಲ್ತಾನೆ
ಇದ್ದೆ. ಅಷ್ಟೇನೂ ಯಾರಿಗೂ ಗೊತ್ತಾಗಿರಲಿಲ್ಲ. ಅದುಕ್ಕೆ ಒಲಂಪಿಕ್ಸ್ ಅನ್ನೋದು. ಅಲ್ಲೊಂದು ಪದಕ
ಗೆಲ್ಲೋದೇ ಎಲ್ಲಾ ಕ್ರೀಡಾಪಟುಗಳ ಕನಸು. ಅಷ್ಟು ರಾಷ್ಟ್ರಗಳಲ್ಲಿ ನಮ್ಮ ರಾಷ್ಟ್ರದ ಭಾವುಟವನ್ನು
ನಮ್ಮಿಂದ ಹಾರಿಸುವುದು, ರಾಷ್ಟ್ರಾಗೀತೆ ಕೇಳಿಸುವ ಸಣ್ಣ ಆಸೆ ಅಷ್ಟೇ.
ಭಾವುಟವೇನೋ ಹಾರಿಸಾಯ್ತು, ರಾಷ್ಟ್ರ ಗೀತೆ ಮುಂದಿನ
ಬಾರಿ.
ನಾನು: ಹೌದು ನೀವು ಈಬಾರಿ
ತುಂಬಾ ಕಡಿಮೆ ಅಂತರದಿಂದ ಚಿನ್ನದ ಪದಕ ಮಿಸ್ ಮಾಡಿಕೊಂಡಿರಿ. ಅದಕ್ಕೇನಾದರೂ ಬೇಸರ?
ಗಿರೀಶ: ಇಲ್ಲ ಪ್ರದೀಪ್ ಅವ್ರೆ. ಬೇಸರ ಎಲ್ಲಾ ಇಲ್ಲ. ನೋಡಿ ಅದು ಹೀಗೆ.
ಒಮ್ಮೇನೆ ಎಲ್ಲಾ ಗೆದ್ದುಬಿಟ್ರೆ, ಎಲ್ಲಾ ಸಾಧಿಸಿಬಿಟ್ಟೆ ಎಂಬ ಅಹಂ ನಮಗೇ ಗೊತ್ತಿಲ್ಲದೇ
ಬಂದುಬಿಡುತ್ತೆ. ಈಗ ನೋಡಿ ನನಗೆ ಮುಂದಿನ ಬಾರಿ ಚಿನ್ನ ಗಳಿಸಲೇಬೇಕು ಅನ್ನೋ ಛಲ ಇದೆ. ಹೋದ
ಬಾರಿಗಿಂತ ಈ ಬಾರಿ ಛಲ ಹೆಚ್ಚಾಗೆ ಇದೆ. ಅದಕ್ಕೆ ಪ್ರತಿದಿನ ಬೆಳಿಗ್ಗೆ, ಸಂಜೆ ಶ್ರದ್ದೆಯಿಂದ
ತಯ್ಯಾರಿ ನಡುಸ್ತಾಯಿದ್ದೀನಿ. ಮುಂದಿನಬಾರಿ ಸಹ ನನ್ನ ಪ್ರಯತ್ನ ನಾನು ಮಾಡ್ತೀನಿ.
ನಾನು: ಆಲ್ ದಿ ಬೆಸ್ಟ್ ಗಿರೀಶ್ ಅವರೆ. ಇದೆಲ್ಲಾ ಆದ ಮೇಲೆ
ನಿಮ್ಮ ಅಪ್ಪ ಅಮ್ಮನಿಗೆ ಎಷ್ಟು ಖುಷಿಯಾಗಿರಬೇಕು ಆಲ್ವಾ? ತುಂಬಾ ಹೆಮ್ಮೆಯಾಗಿರುತ್ತೆ ಅವರಿಗೆ.
ಗಿರೀಶ: ಅವರಿಗೆ ನಾನು ಮೊದಲಿನಿಂದ ಯಾವ ಪದಕ ಗೆದ್ದರು ಸಂತೋಷವೇ,
ಹೆಮ್ಮೆಯೇ.
ನಾನು: ಅದೂ ಸರಿ. ಆದರೆ
ಒಲಂಪಿಕ್ಸ್, ಇದುಕ್ಕೆ ತುಂಬಾ ಹೆಚ್ಚಾಗೆ ಸಂತೋಷವಾಗಿರಬೇಕು.
ಗಿರೀಶ: ಅವರಿಗೇ ಒಲಂಪಿಕ್ಸ್ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಬೇಸಾಯ
ಮಾಡ್ತಿದ್ರು, ಅಪ್ಪ. ನಾ ಪದಕ ಗೆದ್ದ ವಾರ್ತೆ ಬಂತಂತೆ. ನಾನೇ ಕರೆ ಮಾಡಿ ಹೇಳಿದೆ ಆಮೇಲೆ. ಪ್ರತೀ
ಸಲದ ತರವೇ ಆ ಸಲವೂ, ಸಂತೋಷಿಸಿದರು. ಆದರೆ ಅವರಿಗೇ ಈ ಪದಕದ ಮಹತ್ವ ತಿಳಿದಿದ್ದೆ ನಮ್ಮನ್ನು,
ನಮ್ಮೂರಿನವರು ಕುದುರೆ ರಥದ ಮೇಲೆ ಮೆರವಣಿಗೆ ಮಾಡಿಸಿದಾಗಲೇ. ನನಗೂ ತುಂಬಾ ಹೆಮ್ಮೆಯಾಯ್ತು.
ನಾನು: ಆಗದಲೇ ಇರುತ್ತಾ.
ನಿಮಗಿಂತಾ ನಿಮ್ಮ ತಂದೆ ತಾಯಿಗೆ ಹಾಗು ನಿಮ್ಮ ತರಬೇತುದಾರರಿಗೆ ಹೆಮ್ಮೆಯಾಗಿರುತ್ತೆ. ವಿಶೇಷವಾಗಿ
ತರಬೇತುದಾರರಿಗೆ. ನಿಮಗೆ ಎಷ್ಟು ಸಹಾಯ ಮಾಡಿರ್ತಾರೆ. ಏನು ಸುಮ್ಮನೇನಾ ನಿಮ್ಮಲ್ಲಿ ಈ ರೀತಿಯಾ
ಉತ್ಸಾಹ, ಚೈತನ್ಯ ತುಂಬೋದು.
ಗಿರೀಶ: ಹೌದು. ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟವಂತ.
ನಾನು: ಇನ್ನ್ಯಾರು ಹೆಚ್ಚು
ಸಹಾಯ ಮಾಡಿದವರು ನಿಮಗೆ?
ಗಿರೀಶ: ನನ್ನ ಕಂಡರೆ ಮೊದಲಿನಿಂದಾ ಮಾಜೀ ಪ್ರಾಧಾನಿಗಳಾದ ದೇವೇಗೌಡರಿಗೆ ತುಂಬಾ
ಇಷ್ಟ. ಅವರೂರಿನ ಹುಡುಗಾ ಇಷ್ಟೆಲ್ಲಾ ಸಾಧಿಸುತ್ತಿದ್ದಾನೆ ಅಂತಾ ಹೆಮ್ಮೆ ಪಡುತ್ತಿದ್ದಾರು.
ಮತ್ತೆ ಈ ಸಮಯದಲ್ಲಿ ಮೀಡಿಯಾದವರಿಗೆ ಕೃತಜ್ಞತೆ ಸಲ್ಲಿಸಲೇ ಬೇಕು. ಎಷ್ಟು ಪ್ರಚಾರ ಕೊಟ್ರು. ನನಗೆ
ಇಷ್ಟೆಲ್ಲಾ ಗೌರವ ಸಿಕ್ತಾ ಇದೆ ಅಂದರೆ ಒಂದು ರೀತೀಲಿ ಅವರೂ ಕಾರಣವೇ.
ನಾನು: ಖುಷಿಯಾಗುತ್ತೆ ನಿಮ್ಮ
ಕಥೆ ಕೇಳೋಕ್ಕೆ. ಇಷ್ಟೆಲ್ಲಾ ಸನ್ಮಾನಗಳು ನಿಮಗೆ ನಡೆದಿವೆ. ಹೆಗನ್ನುಸ್ತು ನಮ್ಮ ಇನ್ಫೋಸಿಸ್
ಅನುಭವ.
ಗಿರೀಶ: ಇನ್ಫೋಸಿಸ್ ಬಗ್ಗೆ ನಮ್ಮ ಗ್ರಾಮೀಣ ಜನರಲ್ಲಿ ವಿಶೇಷವಾದ ಅಭಿಮಾನ,
ಸ್ಥಾನವಿದೆ. ನೀವು ಇಷ್ಟೆಲ್ಲಾ ಮಾಡಿದ್ದು ತುಂಬಾ ಸಂತೋಷವಾಯಿತು.
ನಾನು: ಗಿರೀಶ್ ಅವರೆ.
ಕುತೂಹಲದಿಂದಾ ಕೇಳ್ತಿದ್ದೀನಿ. ನೀವು ಉಸ್ಸೈನ್ ಬೋಲ್ಟ್ ನ ನೋಡಿದ್ರಾ? ಅವನಂದರೆ ನನಗೆ ತುಂಬಾ
ಇಷ್ಟಾ.
ಗಿರೀಶ: ಹು. ನೋಡಿದ್ದೀನಿ. ನಾವೆಲ್ಲಾ ಒಂದೇ ವಿಲೇಜ್ ಅಲ್ಲೇ ಇದ್ದಿದ್ದು.
ಆಗಾಗ ನೋಡ್ತಾ ಇದ್ದೆ.
ನಾನು: ತುಂಬಾ
ಪ್ರಶ್ನೆಗಳನ್ನು ಕೇಳ್ದೆ ಅನ್ಸುತ್ತೆ. ನೋಡೀ ನಿಮಗೆ ನಡೆದಾ ಸನ್ಮಾನದ ಕೆಲವು ಫೋಟೋಗಳನ್ನ.
ಗಿರೀಶ: ಪ್ರದೀಪ್, ಈ ಎಲ್ಲಾ ಫೋಟೋಗಳನ್ನ ನನಗೆ ಕಳುಸ್ತೀರಾ? ನನಗೂ ಒಂದು ನೆನಪು ಇದು.
ನಾನು: ಅದಕ್ಕೆ ಏನೂ ಗಿರೀಶ್
ಅವರೆ. ಎಲ್ಲಾ ಕಳುಸ್ತೀನಿ ಬಿಡಿ. ಸರಿ ಗಿರೀಶ್ ಅವರೆ. ನೀವು ಕಾರ್ಯಕ್ರಮ ಎಂಜಾಯ್ ಮಾಡಿ. ಮತ್ತೆ
ನಿಮಗೆ ಬರಲಿರುವಾ ಎಲ್ಲಾ ಟೌರ್ನಮೆಂಟ್ ಗಳಿಗೂ ಆಲ್ ದಿ ಬೆಸ್ಟ್.
ಗಿರೀಶ: ಧನ್ಯವಾದ ಪ್ರದೀಪ್.
ಹೀಗೆ ನಡೀತು. ಫೋಟೋಗ್ರಾಫರ್ ಕೆಲಸ ಮಾಡ್ತಾ ಮಾಡ್ತಾ
ಒಬ್ಬ ಸಾಧಕನ ಅನುಭವಗಳನ್ನು ಆಲಿಸುವ ಅವಕಾಶ ಸಿಕ್ತು. ಮೊನ್ನೆ ಅವರಿಗೇ ಎಲ್ಲಾ ಫೋಟೋಗಳನ್ನು
ಕಳಿಸಿದ್ದೆ. ತುಂಬಾ ಖುಷಿಪಟ್ರು. ಅವರು ಬರುವಾ ಎಲ್ಲಾ ಟೌರ್ನಮೆಂಟ್ ಗಳಲ್ಲೂ ಚಿನ್ನವನ್ನೇ
ಗೆಲ್ಲಲ್ಲಿ ಅಂತ ಆಶಿಸುತ್ತೇನೆ. ನೀವು ಪ್ರಾರ್ಥಿಸ್ರಪ್ಪ ಮರೀದಲೇ.